Skip to main content


ಬೇಸಿಗೆ ರಜೆ ಬಂತೆಂದರೆ ಸಾಕು ಎಂದು ಎಲ್ಲರೂ ಕಾಯುತಿದ್ದರೆ, ನಾನು ರಜೆ ಸಿಕ್ಕರೆ ಶಾಲೆ ಶುರುವಾಗಲು ಕಾಯುತಿದ್ದೆ. ಶಾಲೆಗೆ ಹೋದರೆ ಒಂದು ಘಂಟೆಯಾದ್ರೂ ಆಡಲು ಅವಕಾಶ ಇತ್ತು. ಈಗ ದೊಡ್ಡವಳಾದ್ರಿಂದ ಮನೆಯಲ್ಲಿ ಕುಣಿದು ಕುಪ್ಪಳಿಸಿ ಆಡಲು ಅವಕಾಶವಿರಲಿಲ್ಲ. ಹುಡುಗಿ ದೊಡ್ಡವಳಾದ ಮೇಲು , ಹೊರಗೆ ಹೋಗಿ ಆಡಿದ್ರೆ ಊರಿನವರು ಏನು ಹೇಳಿಯಾರು ಎಂಬ ಭಯ.  ಬೆಳಿಗ್ಗೆಯಾದ್ರೆ ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿಯಾದ್ರು ಸಮಯ ಹೋಗುತಿತ್ತು. ಮಧ್ಯಾಹ್ನ ಅಮ್ಮ ಮಲಗಿದ್ರೆ ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಮನೆಯಲ್ಲಿ ಕೂರಲು ಬೇಜಾರು. ಇದ್ದ ಕಥೆ ಪುಸ್ತಕಗಳನ್ನೆಲ್ಲ  ಆಗಲೇ ಮೂರ್ನಾಲ್ಕು ಸಲ ಓದಿ ಆಗಿರುತ್ತಿತ್ತು. ಏನು ಮಾಡಬೇಕೆಂದು ತೋಚದಿದ್ದಾಗ , ಕಾಣಿಸಿದ್ದು ವಿವಾಹದ ಆಮಂತ್ರಣ ಪತ್ರಿಕೆಗಳು ಹಾಗು ಹಳೆ ಪುಸ್ತಕಗಳ ರಟ್ಟುಗಳು. ವಿವಿಧ ಶೈಲಿಗಳ ಆಮಂತ್ರಣ ಪತ್ರಿಕೆಗಳನ್ನು ಒಟ್ಟು ಹಾಕಿ, ಅವುಗಳನ್ನು ಕತ್ತರಿಸುತ್ತಾ ಏನಾದ್ರು ಒಂದು ಮಾಡಿ ಸಮಯ ಕಳೆಯುತ್ತಿದ್ದೆ. ಅಮ್ಮ ನಿದ್ದೆ ಯಿಂದ ಎದ್ದ ಕೂಡಲೇ, ಇನ್ನು ಮದುವೆ ಸಮಾರಂಭ ಮುಗಿಯದ ಪತ್ರಿಕೆಗಳನ್ನು ಹರಿದಿದಕ್ಕೆ ಬೈಗುಳ ತಿನ್ನುವುದು ರೂಢಿಯಾಗಿತ್ತು.

ಹೀಗೆ ಸಣ್ಣ ಪುಟ್ಟ ಕರಕೌಶಲಗಳನ್ನು ಮಾಡುತ್ತಾ, ಕತೆ ಪುಸ್ತಕ ಓದುತ್ತ, ಹಳೆ ಬುಕ್ಕುಗಳ ರಟ್ಟು ಹಿಡ್ಕೊಂಡು ಕಂಪ್ಯೂಟರ್ ಮಾಡುತ್ತಾ, ಹಿಂದಿನ ತರಗತಿಯ ಪುಸ್ತಕಗಳಲ್ಲಿ ಇದ್ದ ಚಿತ್ರಗಳನ್ನು ಕತ್ತರಿಸಿ ಒಂದು ಪುಸ್ತಕದಲ್ಲಿ ಅಂಟಿಸುತ್ತಾ  ನನಗೆ ಮುಂಚೆ ಬೋರಿಂಗ್  ಎನಿಸುತ್ತಿದ್ದ  ಬೇಸಿಗೆ ರಜೆ ಮನೋರಂಜಕವಾಗಿ ಕಳೆಯುತಿತ್ತು.

 ಕಾಲೇಜಿನ  ಮೆಟ್ಟಿಲು ಹತ್ತಿದಂತೆ ಮೊಬೈಲ್, ಲ್ಯಾಪ್ಟಾಪ್ ಕೈಗೆ ಸಿಕ್ಕಿತು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾನು ಹಿಂದೆ ಉಳಿಯಬಾರದೆಂದು, ಜಾಲತಾಣ ದಲ್ಲಿ ಇದ್ದ ಕೋರ್ಸ್ ಗಳಿಗೆ ಸೇರುತ್ತಾ ಕಾಲ ಕಳೆಯುವುದು ಅಭ್ಯಾಸವಾಯ್ತು. ಕಾಲೇಜು ಶುರುವಾದ್ರೆ ಎಕ್ಸಾಮ್ಸ್ , ಅಸೈನ್ಮೆಂಟ್ಸ್ ಹಿಂದೆ ಓಡುತಿದ್ದರೆ, ಬೇಸಿಗೆ ರಜದಲ್ಲಿ ಕೋರ್ಸ್ ಗಳ ಹಿಂದೆ ಓಡುವುದೇ ಜೀವನವಾಯ್ತು. ಕೆಲಸಕ್ಕೆ ಸೇರಿದ ಮೇಲೆ, ಈಗ ಒಂದು ದಿನ ರಜೆ ಸಿಕ್ಕರೂ, ಇಡೀ ದಿನ ಗೆಳೆಯರೊಡನೆ ಹೊರಗೆ ಸುತ್ತಲೂ ಹೋಗುವುದು, ಸಿನಮಾ ನೋಡುವುದು, ಸಾಮಾಜಿಕ ಜಾಲ ತಾಣಗಳಲ್ಲಿ ಸಮಯ ಕಳೆಯುವುದು ಹೀಗೆ ೨೪ ಘಂಟೆ ನನ್ನನ್ನು ನಾನು ತೊಡಗಿಸಿಕೊಂಡರು ಏನೋ ಒಂದು ಬೇಜಾರು. ಏನೋ ಕಳೆದು ಕೊಂಡಿದ್ದೇನೆ ಎಂಬ ಭಾವ. ಜೀವನ ಬೇಸರವೆನಿಸುತ್ತದೆ.

ಮುಂಚೆ ಮಧ್ಯಾಹ್ನ ಮಲಗಿ ಸ್ವಲ್ಪ ಹೊತ್ತು ಸಮಯ ಕಳೆಯಲಿ ಎಂದು ಮಲಗಿದ್ರು ನಿದ್ದೆ ಹತ್ತುತ್ತಿರಲಿಲ್ಲ. ಏನಾದ್ರು ಮಾಡುವ ಎಂಬ ಯೋಚನೆಗಳು. ಈಗ ಮಾಡಲು ಸುಮಾರು ಕೆಲಸವಿದ್ದರೂ ಮಧ್ಯಾಹ್ನ ನಿದ್ರಾದೇವಿ ಆವರಿಸುತ್ತಾಳೆ.

ಒಂದು ಕ್ಷಣ ನಾವು ಇವೆರಡರಲ್ಲಿಯೂ ವ್ಯತ್ಯಾಸ ಗಮನಿಸಿದರೆ, ಒಂದರಲ್ಲಿ ನಾನು  ನನ್ನ  ಸಮಯವನ್ನು ನನಗಾಗಿ  ಕಳೆಯುತ್ತಿದ್ದೆ , ಇನ್ನೊಂದರಲ್ಲಿ ಎಲ್ಲರಿಗಿಂತ ತಾನು ಮುಂದೆ ಇರಬೇಕೆಂದೋ ಅಲ್ಲ ಗೆಳೆಯರ  ತೃಪ್ತಿಗೋಸ್ಕರನೋ ಸಮಯ ಕಳೆಯುತಿದ್ದೇನೆ. ಎರಡನೆಯದು ತಪ್ಪು ಎಂದು ಹೇಳುತ್ತಿಲ್ಲ. ಆದರೆ ಅವುಗಳೊಟ್ಟಿಗೆ ನಾನು ನನಗೋಸ್ಕರ ಏನು ಮಾಡುತ್ತಿದ್ದೇನೆ ಎಂಬುದು ಮುಖ್ಯ.ಇವುಗಳೆಲ್ಲದರ ಮಧ್ಯೆ ಒಂದು ಘಳಿಗೆ ಒಬ್ಬಳೇ ಇದ್ದು ಸುಮ್ಮನೆ ಕೂತು  ಹಾಡು ಕೇಳುತ್ತ, ಕತೆ ಪುಸ್ತಕ ಓದುತ್ತಿದ್ದರೆ ಏನೋ ತೃಪ್ತಿ ಕೊಡುತ್ತದೆ.

ನಮಗೋಸ್ಕರ ನಾವು ಏನು ಮಾಡುತ್ತಿಲ್ಲ ಎಂದ ಕೂಡಲೇ ಈಗ ಜಾಲ ತಾಣದಲ್ಲಿ ಏನು ಮಾಡಬಹುದೆಂದು ಹುಡುಕಲು ಶುರು ಮಾಡುತ್ತೇವೆ. ಜೀವನದ ಬಗ್ಗೆ ಪ್ರೇರೇಪಿಸುವಂತಹ, ಆಧ್ಯಾತ್ಮಿಕ ಜೀವನದಡೆ ಕೊಂಡೊಯ್ಯುವಂತಹ ವಿಡಿಯೋಗಳನ್ನು ನೋಡುತ್ತಾ ಕಾಲ ಕಳೆಯುತ್ತೇವೇ ಹೊರತು, ನಮಗೆ ಇಷ್ಟವಿದ್ದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ.

ಬೇರೆಯವರ ಖುಷಿಗೋಸ್ಕರ ಅಥವಾ ಅವರಿಂದ ತಾನು   ಮುಂದಿರಬೇಕೆಂದು ನಾವು ನಮ್ಮ ಎಲ್ಲಾ ಸಮಯವನ್ನು ಅದಕ್ಕಾಗಿ ಮುಡಿಪಾಗಿರಿಸುವುದು  ಜೀವನ ಪೂರ್ತಿ ಸಾಧ್ಯವೇ ಇಲ್ಲ. ಹಾಗೆಂದ ಮಾತ್ರಕ್ಕೆ ನಮ್ಮ ಜೀವನದ  ಗುರಿಯ ಹಿಂದೆ ಓಡುವುದು ಅಥವಾ ಗೆಳೆಯೊರಡನೆ ಕಾಲ ಕಳೆಯುವುದು  ಬಿಟ್ಟು ಬಿಡಬೇಕೆಂದೇನಿಲ್ಲ. ಇವುಗಳಿಂದ ದೂರ ಹೋಗಿ, ನಮ್ಮಷ್ಟಕ್ಕೆ  ನಾವು ಇರಬೇಕೆಂದುಕೊಂಡರು ಜೀವನ ಬೇಜಾರೆನಿಸಿಬಿಡುತ್ತದೆ. ಎಲ್ಲದರಲ್ಲೂ ಖುಷಿ ಕಾಣುತ್ತ, ಇನ್ನೊಬರಲ್ಲಿ  ನಮ್ಮ ಖುಷಿಯನ್ನು ಹುಡುಕುವುದಕ್ಕಿಂತ ನಮ್ಮಲ್ಲಿಯೇ  ಅದನ್ನು ಕಂಡರೆ ಜೀವನ ಎಂದು ಬೋರಿಂಗ್  ಎನಿಸುವುದಿಲ್ಲ.



Comments

Post a Comment

Popular posts from this blog

ಅವಳು !

ಅಂತರ್ಜಾಲ, ಆಧುನಿಕತೆ ಎಂಬ ಮಾಯಾಲೋಕದಲ್ಲಿ  ಸಿಲುಕಿದ್ದ ಅವಳು,ಕಾಲಚಕ್ರ ಉರುಳುತಿದ್ದಂತೆ  ತನ್ನನು ತಾನು ಮರೆತಿದ್ದಳು ! ಮೂಕಪ್ರೇಕ್ಷಕಿಯಾದಳು !  ಹೀಗೆ ಒಂದು ದಿನ , ತನ್ನ ಬಾಲ್ಯ ವನ್ನು ನೆನಪಿಸಿಕೊಳುತಿದ್ದ ಅವಳಿಗೆ,  ತಾನು ಏನೋ ಕಳೆದು ಕೊಂಡಿದ್ದೆನೆಂದು ಅರಿವಾಯಿತು ! ಅದು ಏನೆಂಬುದು ಗೊತ್ತಾದಂತೆ ,  ಪೆನ್ನು ಪೇಪರ್ ತೆಗೆದು ಬರೆಯಲು ಶುರು ಮಾಡಿಯೇಬಿಟ್ಟಳು !

ಕಾಡು ನಾಡಾದರೆ....!!!!!

                                ನವಿಲೊಂದು ನಿಂತಿತ್ತು ಇಂದು ಎನ್ನ ಮುಂದೆ , ಅದನ್ನ ನೋಡಿ ಎನ್ನ ಮನ ಅತ್ತಿತು ! ಕಾಲವೊಂದಿತ್ತು ನಾ ನವಿಲ ಕಂಡರೆ ಜಿಗಿಯುತಿದ್ದೆ ಆ ಹರುಷ ಇಂದು ಎನ್ನಲ್ಲಿ ಮರೆಯಾಗಿತ್ತು ! ಎರಡು ಮೈಲು ದೂರದಲ್ಲಿದ್ದ ಮಯೂರನ  ಕಂಡರೆ ಕಣ್ಣಿಗೆ ಹಬ್ಬ ! ಇಂದು ಎರಡು ಹೆಜ್ಜೆ ದೂರವಿದ್ದರು,  ನೋಡಲು ಒಲ್ಲೆ ಎಂದೆ ! ಮುಂಗಾರು ಮಳೆಗೆ ಗರಿಬಿಚ್ಚಿ , ನಲಿಯಬೇಕಿದ್ದ ನವಿಲು, ಇಂದು ಗರಿಯ ಮುದುರಿಕೊಂಡು , ಅತ್ತ ಇತ್ತ ನೋಡುತ್ತಿತ್ತು ! ಕಾಡು ನಾಡಾಗಿ ಮಾರ್ಪಾಡಾಗಿತ್ತು, ತನ್ನ ಕಾಡ ಬಿಟ್ಟು , ನಾಡಿಗೆ ಬಂದ ನವಿಲು ಇಂದು , ಅನಾಥವಾಗಿತ್ತು !!!

ಫೀಸ್ ಜಾಸ್ತಿಯಾಗಲು ಕಾರಣ ಪಾಪದವರು ವಿದ್ಯಾವಂತರಾಗ ಬೇಕೆನ್ನುವುದರಿಂದ ಅಂತೆ !!!

ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ  ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು. ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?" ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ." ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು. ಹೆಂಗಸು ೧ : "ಒಹ್! ಹಾಗೇನು .ಅಂದ್ರೆ  ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ." ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ  ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. " ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು ,  ಕಲೀಲಿ. " ಹೆಂಗಸು ೨: "ಏನೋ ಅವ...