Skip to main content

ಸ್ಪೂರ್ತಿ

ಮುಂಜಾನೆ ಎದ್ದು ಸ್ನಾನ ಮಾಡಿ ಬಂದು ಮೊಬೈಲ್ ನೋಡಿದರೆ ಆರು ಮಿಸ್ಸ್ಡ್ ಕಾಲ್ಸ್ ಇದ್ವು. ಕರೆ ಮಾಡಿದೆ. ಆಚೆಯಿಂದ "ಅಕ್ಕ ಇವತ್ತು ಏಕ್ಸಾಮ್ ಬರೀಲೀಕ್ಕೆ ಬರ್ತಿದ್ದೀರಿ ತಾನೇ ?" ಎಂದು  ಹುಡುಗಿ ಗಾಬರಿ ಸ್ವರದಲ್ಲಿ ಕೇಳಿದಳು. "ಹೌದು ! ಹೊರಡ್ತಿದ್ದೀನಿ." ಎಂದು ಸಮಾಧಾನಿಸಿ ಫೋನ್ ಪಕ್ಕಕ್ಕಿಟ್ಟು, ಬೇಗನೆ ತಯಾರಾಗಿ ರೂಮಿನಿಂದ ಹೊರಡಿದೆ. ಅದು ೪೫ ನಿಮಿಷಗಳ ಪ್ರಯಾಣ. ಅಷ್ಟರಲ್ಲಿ ಮೂರ್ನಾಲ್ಕು ಸಲ ನಾನು ಎಲ್ಲಿದ್ದೀನಿ ಎಂದು ವಿಚಾರಿಸಲು ಕರೆ ಮಾಡಿದ್ದಳು. ೮:೪೫ ಗೆ ತಲುಪಬೇಕಿತ್ತು. ೮:೩೦ ಗೆ ನೇ ತಲುಪಿದ್ದೆ.

ಕಾಲೇಜು ಹೊರಗೆ ತನ್ನ ಗೆಳತಿಯೊಟ್ಟಿಗೆ ಕಾದು ನಿಂತಿದ್ದಳು.  "ಹಾಯ್, ಸ್ಪೂರ್ತಿ ತಾನೇ ? " ಅಂದೆ. "ಹೌದಕ್ಕಾ, ಬಂದ್ರಾ. ಹೇಗೆ ಪರಿಚಯವಾಯ್ತು . ನಾವು ಎಂದೂ ಭೇಟಿಯಾಗಿಲ್ಲ ಅಲ್ವಾ" ಎಂದಾಗ, ಅಲ್ಲಿರುವ ಜನರಿಗಿಂತ ಭಿನ್ನವಾಗಿ ಅವಳು ಇದ್ದುದ್ದರಿಂದ ಪರಿಚಯವಾಯ್ತು ಎಂದು ಹೇಳಲು ಮನಸ್ಸಾಗಲಿಲ್ಲ. ಸುಮ್ನೆ ಅವಳ ಬೆನ್ನು ತಟ್ಟಿ ನಕ್ಕು ಬಿಟ್ಟೆ. "ಸಾರೀ ಅಕ್ಕ, ತುಂಬಾ ಸಲ ಕಾಲ್ ಮಾಡಿದೆ. ಮೊನ್ನೆ ನನ್ನ ಗೆಳತಿಗೆ ಒಬ್ರು ಏಕ್ಸಾಮ್ ಬರೀಲಿಕ್ಕೆ ಬರ್ತೇನೆ ಹೇಳಿ ಬಂದಿರ್ಲಿಲ್ಲ. ಅದ್ಕೆ ಗಾಬರಿಯಾಗಿದ್ದೆ " ಅಂದ್ಲು.

ಕಾಲೇಜು ಒಳಗೆ ಹೋಗಿ ರೂಮ್ ಹುಡುಕಿ ಅಲ್ಲಿ ಕೂತು ಮಾತಾಡಲು ಶುರು ಮಾಡಿದ್ವಿ. ಸ್ವಲ್ಪ ಹೊತ್ತಾದ ನಂತರ ಸ್ಪೂರ್ತಿ ಹಾಗು ಅವಳ ಗೆಳತಿಯಂತೆ ಏಳೆಂಟು ಜನ ತಮ್ಮ ಬರಹಗಾರರೊಟ್ಟಿಗೆ (Scribe) ಬಂದರು.  ಏಕ್ಸಾಮ್ ಶುರುವಾಯ್ತು. ೩ ಘಂಟೆಯೊಳಗೆ ಬರೆದು ಮುಗಿಸಿದ್ವಿ. ಎಲ್ಲಾ ಪ್ರಶ್ನೆಗಳಿಗೂ ಅಚ್ಚುಕಟ್ಟಾಗಿ ಉತ್ತರ ನೀಡಿದ್ದಳು. ಅದಾದ್ನಂತರ ಇನ್ನು ನಮಗೆ ೩ ತಿಂಗಳು ರಜೆ ಅಕ್ಕ ಅಂತ ಮುಗುಳ್ನಗುತ್ತಾ ಹೇಳಿದಳು. ಊರಿಗೆ ಹೋಗಿ ಅಪ್ಪ, ಅಮ್ಮ, ತಂಗಿ ಯೊಟ್ಟಿಗೆ ಮಜಾ ಮಾಡ್ಬಹುದಲ್ವಾ  ಎಂದಾಗ, "ಇಲ್ಲ ಅಕ್ಕ ಮನೆಯಲ್ಲಿ ಒಂದೇ ವಾರ ಇದ್ದು ಬರ್ತೀನಿ, ಆಮೇಲೆ ಇಲ್ಲಿ ಬಂದು ಕಂಪ್ಯೂಟರ್ ಕೋರ್ಸ್ ಮಾಡ್ತೀನಿ" ಅಂದ್ಲು.

ಪರೀಕ್ಷೆ ಮುಗಿಸಿ ಇಡೀ ವರ್ಷ  ಓದಿ ಓದಿ ಸಾಕಾಯ್ತು(ಓದಿರುವುದು ಕೇವಲ ಪರೀಕ್ಷೆಯ ಹಿಂದಿನ ರಾತ್ರಿಯಾಗಿದ್ದರು) , ೩ ತಿಂಗಳು ರಜಾ ಸಿಕ್ಕರೆ ದಿನಾ ಬೆಳಗ್ಗೆ ಹತ್ತು ಗಂಟೆ ತನಕ ಮಲಗಿ, ದಿನವಿಡೀ ಮೂವಿ, ಸೀರೀಸ್ ಅಥವಾ ಗೇಮ್ ಆಡ್ಬಹುದು ಅಂತ ಲೆಕ್ಕಾಚಾರ ಹಾಕುತ್ತಾ ನಾವು ಇರುತ್ತೇವೆ.  ಇಲ್ಲಿ ಹದಿನಾರು ವರ್ಷದ ಹುಡುಗಿ, ಆಡಿಯೋ ಕೇಳಿ, ಬ್ರೈಲ್ ಪುಸ್ತಕ ಓದಿ ಪರೀಕ್ಷೆ ಬರೆದು, ಇಷ್ಟು ಚಿಕ್ಕ ವಯಸ್ಸಲ್ಲೇ ತನ್ನ ಹೆತ್ತವರು, ಒಡಹುಟ್ಟಿದವರಿಂದ ದೂರ ಇದ್ದು ಹಾಸ್ಟೆಲ್ ಅಲ್ಲಿ ಇದ್ರೂ, ತನಗೆ ಸಿಕ್ಕ ಸಮಯದಲ್ಲಿ ಏನಾದರೂ ಹೊಸತು ಕಲಿಯಬೇಕೆಂದು ಹೊರಟಿದನ್ನು ನೋಡಿ ಮೂಕ ವಿಸ್ಮಿತಳಾದೆ.  ಮುಂದೇನಾಗಬೇಕು ಅಂತ ಅನ್ಕೊಂಡಿದ್ದೀಯ ಎಂದು ಕೇಳಿದರೆ, "ಅಕ್ಕಾ ನಂಗೆ ಐಎಎಸ್ ಆಫೀಸರ್ ಆಗ್ಬೇಕು" ಅಂದ್ಲು. ಅವಳ ಪ್ರತಿಯೊಂದು ಮಾತು, ಅವಳಿಗೆ ತನ್ನ ಮೇಲಿದ್ದ ಆತ್ಮ ವಿಶ್ವಾಸ ತೋರಿಸುತಿತ್ತು. ತನ್ನ ಕುರುಡುತನವನ್ನು ಒಂದು ಮಿತಿಯಾಗಿ ಎಣಿಸದೆ ಕನಸನ್ನು ಕಾಣುತ್ತಿರುವ ಹುಡುಗಿಯೇ, ನಮಗೆಲ್ಲರಿಗೂ ಸ್ಪೂರ್ತಿ.

Comments

Popular posts from this blog

ಹೀಗೆ ಒಂದು ದಿನ ಕನಸಲ್ಲಿ ಕಂಡ ನನ್ನ ಕನಸಿನ ಗುಡಿಸಲು

ಕೃಪೆ : ಗೂಗಲ್ ಇಮೇಜ್ಸ್                       ಮಳೆ ಹನಿಗಳು  ಕಿಟಕಿ ಗಾಜಿಗೆ ಬೀಳುವ ಸದ್ದು ಕೇಳಿ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅಲ್ಲೇ ಮೇಜಲ್ಲಿಟ್ಟ ಬುದ್ಧನ ಮುಗುಳ್ನಗೆ, ಪಕ್ಕದಲ್ಲಿರುವ ಕೃಷ್ಣಾರ್ಜುನರ  ರಥದ ಮಾದರಿ ಕಂಡರೆ  ಏನೋ ಮನಸ್ಸಿಗೆ ಮುದ ನೀಡುವುದು . ಚಿಕ್ಕಂದಿನಿಂದ ಅವೆರಡನ್ನು ಕೊಳ್ಳುವ ಆಸೆ. ಆದರೆ ಎಲ್ಲಿಯೂ ನನಗೆ ಬೇಕಂತಿರುವುದು ಸಿಕ್ಕಿರಲಿಲ್ಲ. ಕಳೆದ ವರ್ಷ ಉಡುಗೊರೆಯಾಗಿ ಪಡೆದಿದ್ದೆ.  ಪರದೆ ಸರಿಸಿ ಕಿಟಕಿ ಹೊರಗೆ ನೋಡಿದ್ರೆ ನಾ ನೆಟ್ಟ ಗುಲಾಬಿ  ಗಿಡದಲ್ಲಿದ್ದ ಒಂದು ಗುಲಾಬಿ ನನ್ನ ನೋಡಿ ನಕ್ಕಂತೆ ಕಾಣುತಿತ್ತು. ಹೂವೆಂದರೆ  ಪಂಚಪ್ರಾಣ. ಮಲ್ಲಿಗೆಯ ಸುವಾಸನೆ, ಗುಲಾಬಿಯ  ಸೌಂದರ್ಯ ಪದಗಳಲ್ಲಿ  ವರ್ಣಿಸಲು ಅಸಾಧ್ಯ.  ಮಳೆ ಬಿದ್ದಾಗ  ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ  ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ  ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ  ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂದ ಬೀಳುತ್ತವೆ ಎಂದು ಸಣ್ಣದಿರುವಾಗ ಯಾರೋ ಹೇಳಿದ ನೆನಪು. ಬಲಕ್ಕೆ ತಿರುಗಿದರೆ ನನ್ನ ತರಕಾರಿ ತೋಟ. ಬಾಳೆ, ತೆಂಗು, ಮಾವಿನ ಮರಗಳು ಮಳೆಗೆ ಮೈ ಒಡ್ಡಿ ನಿಂ

ಸ್ವಾತಂತ್ರ್ಯ ಹಾಗೂ ವ್ಯಕ್ತಿತ್ವ ಅಂದರೆ ಏನು ಎಂಬುದು ಮರೆತುಬಿಟ್ಟಂತಿದೆ !

ದೊಡ್ಡವನಾದ ಮೇಲೆ ನಿನ್ನ ಕಾಲಲ್ಲಿ ನೀನು ನಿಲ್ಲಬೇಕು ಎಂಬುದು ಎಲ್ಲ ಹೆತ್ತವರು ತಮ್ಮ ಮಕ್ಕಳಿಗೆ ಹೇಳುವ ಮಾತು. ಕೆಲವು ವರ್ಷಗಳ ಹಿಂದೆ ಇದು ಕೇವಲ ಗಂಡಿಗೆ ಮಾತ್ರ ಸೀಮಿತವಾಗಿತ್ತು.ಆದರೆ ಕಾಲ ಬದಲಾಗಿದೆ. ಜನರು ಬದಲಾಗಿದ್ದಾರೆ. ಹುಡುಗಿಗೂ ಹುಡುಗರಂತೆಯೇ ಶಿಕ್ಷಣ, ಸ್ವಾತಂತ್ರ್ಯ ಕೊಟ್ಟು (ಎಲ್ಲ ಕಡೆಗಳಲ್ಲಿ ಅಲ್ಲದಿದ್ದರೂ ಸುಮಾರು ಕಡೆಗಳಲ್ಲಿ) ಹುಡುಗಿ ಏನು ಹುಡುಗನಿಗಿಂತ ಕಮ್ಮಿ ಇಲ್ಲ ಎಂಬುದನ್ನು ತೋರಿಸುವವರು ಇದ್ದಾರೆ. ಆದರೆ ಹುಡುಗಿಯ ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಸಮಾಜದ ಮುಂದೆ ಹೋರಾಡಿದ್ದು ಇವತ್ತಿನ ಮೊಡರ್ನ್ ಹುಡುಗಿ ಎನ್ನುವವರು ಅವರಿಗೆ ಸಿಕ್ಕ ಸ್ವಾತಂತ್ಯವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಏನೋ ಎಂದು ಕೆಲವೊಮ್ಮೆ ಅನಿಸುವದುಂಟು. ಎಲ್ಲ ಕೈ ಬೆರಳುಗಳು ಒಂದೇ ತರ ಇಲ್ಲದ ಹಾಗೆ ಜನರು ಒಬ್ಬರಿಗಿಂತ ಇನ್ನೊಬರು ಭಿನ್ನವಾಗಿರುತ್ತಾರೆ. ಎಲ್ಲರ ಮನೆ ಪರಿಸ್ಥಿತಿ ಒಂದೇ ತರ ಇರುವದಿಲ್ಲ. ಗಂಡಿನ ಸಂಬಳ ಮೂಲಭೂತ ಸೌಕರ್ಯಗಳನ್ನು ಹೊಂದಿಸಲು ಸಾಕಾಗದಿರಬಹುದು, ಅವನಿಗೆ ಮನೆಯ ಜವಾಬ್ದಾರಿಯಲ್ಲಿ ಹೆಗಲುಕೊಡಬೇಕು ಅಥವಾ ತಾನು ಚಿಕ್ಕಂದಿನಿಂದ ಕಂಡ ಕನಸನ್ನು ನನಸು ಮಾಡಬೇಕು ಎಂದುಕೊಂಡು ಮನೆ ಹಾಗು ಹೊರಗಿನ ಕೆಲಸವನ್ನು ಸಮತೋಲನಿಸುವವರನ್ನು ನಾನು ಗೌರವಿಸುತ್ತೇನೆ. ಆದರೆ ಇತ್ತೀಚೆಗಷ್ಟೇ quora ಎಂಬ ವೆಬ್ಸೈಟಲ್ಲಿ ಒಂದು ಪ್ರಶ್ನೆ ಹೀಗಿತ್ತು "What are the things a woman should NOT do after getting m