Skip to main content

ಮೊಬೈಲ್ ಕ್ಯಾಮೆರಾದಲ್ಲಿ ಭೂತಕೋಲ !!


ಬೆಳಿಗ್ಗೆ ಎದ್ದಕೂಡಲೇ ಸರಿಯಾಗಿ ಕಣ್ಣು ಬಿಟ್ಟಿರದಿದ್ದರು,  ನಮ್ಮ ಕೈ ಮಾತ್ರ  ಮೊಬೈಲಿಗಾಗಿ ಹುಡುಕಾಡಲು ಶುರು ಮಾಡುತ್ತೆ. ಅರೆಬರೆ ನಿದ್ದೆಯಲ್ಲೂ ಬೇರೆಯವರ ಸ್ಟೇಟಸ್ ನೋಡುವ ಕುತೂಹಲ. ಪಕ್ಕದಲ್ಲಿ ಕೂತವರಿಗೆ ಗುಡ್ ಮಾರ್ನಿಂಗ್ ಹೇಳುವ ಬದಲು ಸಾವಿರಾರು ಮೈಲಿ ದೂರವಿದ್ದ ನೂರಾರು ಜನಕ್ಕೆ ಮುಂಜಾನೆಯ ಶುಭಾಷಯ ಕಳಿಸಿ ಏಳುವುದು ನಮ್ಮ ದಿನಚರಿಯಾಗಿದೆ. ಸ್ಟೇಟಸ್ ಅಲ್ಲಿರುವ ಟಿಕ್ ಟಾಕ್ ವಿಡಿಯೋಗಳು ಇಂದು ನಮಗೆ ಸುಪ್ರಭಾತ.
ಹೀಗೆ ಬೆಳಿಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ಕಣ್ಣು ಮುಚ್ಚುವವರೆಗೂ, ದೈನಂದಿನ ಕೆಲಸದ ನಡುವೆಯೂ ಮೊಬೈಲ್ ನೋಡುತ್ತಾ ದಿನ ಕಳೆಯುತ್ತೇವೆ.

ಕಳೆದ ವಾರ ನಮ್ಮೂರಲ್ಲಿ  ನಡೆಯುವ ಭೂತಕೋಲಕ್ಕೆ ಹೋಗಿದ್ದೆ. ದಕ್ಷಿಣ ಕನ್ನಡ ಉಡುಪಿ ಪ್ರದೇಶಗಳಲ್ಲಿ ದೇವರನ್ನು ನಂಬಿದಷ್ಟೇ ಭೂತವನ್ನು ಜನರು ನಂಬುತ್ತಾರೆ. ಕೆಲಸಕ್ಕೆಂದು ಪರ ಊರಲ್ಲಿ ನೆಲೆಸಿದ್ದರೂ, ವರ್ಷಕ್ಕೊಮ್ಮೆ ನಡೆಯುವ ಈ ಧಾರ್ಮಿಕ ಆಚರಣೆಗೆ ಎಲ್ಲರೂ ತಾವು ಹುಟ್ಟಿ ಬೆಳೆದ ಊರಿಗೆ ಬರುವುದುಂಟು. ಸಣ್ಣದಿರುವಾಗ ಐಸ್ಕ್ರೀಮ್, ಚರ್ಮುರಿ ತಿನ್ನಲು ಹಣ ಸಿಗುತ್ತದೆಂದು ಭೂತಕೋಲಕ್ಕೆ ಹುಮ್ಮಸ್ಸಿನಿಂದ ಹೋಗುತ್ತಿದ್ದೆ. ಹೈಸ್ಕೂಲಿಗೆ ಬಂದ ನಂತರ, ಭೂತಕೋಲ ವೆಲ್ಲ ಮೂಢನಂಬಿಕೆ, ಪಾತ್ರಿಗಳು ಚೆಂಡೆ, ಬ್ಯಾಂಡಿನ ಶಬ್ದಕ್ಕೆ ಹಾಗೆ ನಲಿಯುದೆಂದು ಅಮ್ಮನಿಗೆ ಹೇಳಿದ್ದುಂಟು. ಆಗ ಅಮ್ಮ, ವಿಜ್ಞಾನ ಕಲಿತಕೂಡಲೇ ನಮ್ಮ ಪೂರ್ವಜರು ನಂಬಿಕೊಂಡು ಬಂದ ಸಂಪ್ರದಾಯವನ್ನು ಮರೀಬೇಡಿ ಎಂದು ತಿಳಿ ಹೇಳುತ್ತಿದ್ದರು.  ಹೀಗೆ ಅಮ್ಮನ ಒತ್ತಾಯದಿಂದ ಹೋಗಿ ಅಲ್ಲಿ ಕೂರುತ್ತಿದ್ದೆ.

ಕೆಲವರು ತಾವು ವ್ಯವಹಾರದಲ್ಲಿ ಅನುಭವಿಸುವ ಕಷ್ಟ, ತಮ್ಮ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ಬಗ್ಗೆ ಹೀಗೆ ಹಲವಾರು ಸಮಸ್ಯೆಗಳನ್ನು ಪಾತ್ರಿಗೆ ಹೇಳುವುದುಂಟು. ಅವರಿಗೆ ಪ್ರಸಾದವನ್ನು ಕೊಟ್ಟು, ತನ್ನನ್ನು ನಂಬಿದ ಭಕ್ತರ ಕೈ ಬಿಡುವುದಿಲ್ಲ, ಒಳ್ಳೇದಾಗುತ್ತದೆ  ಎಂದು ಆಶಿರ್ವಾದಿಸುತ್ತಾನೆ. ಇವೆಲ್ಲವನ್ನೂ ಹೇಗೆ ಜನರು ನಂಬುತ್ತಾರೆ ಎಂದು ಅಚ್ಚರಿಯಾಗುತಿತ್ತು. ಆರೋಗ್ಯದ ಸಮಸ್ಯೆಯಿದ್ದರೆ ಪ್ರಸಾದ ಹೇಗೆ ಅದನ್ನು ನಿವಾರಣೆ ಮಾಡುತ್ತದೆ, ಒಳ್ಳೆ ಡಾಕ್ಟರಿಗೆ ತೋರಿಸಿದರೆ ಆಯ್ತು ಎಂದು ಮನಸಲ್ಲೇ ಆಲೋಚಿಸುತ್ತಿದ್ದೆ. ಅಮ್ಮನನ್ನಾಗಲಿ, ಮನೆಯ ಯಾರೇ ಹಿರಿಯರನ್ನಾಗಲಿ ಪ್ರಶ್ನಿಸುವ ಧೈರ್ಯವಿರಲಿಲ್ಲ. ಆದರೆ ನಿಧಾನವಾಗಿ ಕೆಲವು ಜೀವನದ ಅನುಭವಗಳಿಂದಾಗಿ, ದೈವ ಶಕ್ತಿ ಎಂಬುವುದಿದೆ ಎಂದು ನಂಬಲು ಶುರು ಮಾಡಿದೆ. ಈಗ ದೇವಸ್ಥಾನ/ದೈವಸ್ಥಾನಗಳಿಗೆ ಹೋಗಿ ಬಂದರೆ ಮನಸ್ಸಿಗೊಂದು ನೆಮ್ಮದಿಯಾಗುತ್ತದೆ.

ಮೊಬೈಲ್ ಚಟ ಮತ್ತು ದೈವಕ್ಕೂ ಏನು ಸಂಬಂಧ ಎಂದು ಓದುಗರು ಎಣಿಸುತ್ತಿರಬಹುದು. ಆಗಲೇ ಹೇಳಿದಂತೆ ಕಳೆದ ವಾರ ಭೂತ ಕೋಲಕ್ಕೆಂದು ಊರಿಗೆ ಹೋಗಿದ್ದೆ. ದೈವದ ಮೇಲಿನ ಭಕ್ತಿಯಿಂದಲೇ ನೂರಾರು ಮಂದಿ ಬಂದಿರುವುದು ಹೌದು. ಸಣ್ಣದಿರುವಾಗ ಜನರು ದೈವವನ್ನು ಯಾಕೆ ನಂಬುತ್ತಾರೆಂದು ಪ್ರಶ್ನೆಯಿತ್ತು, ಆದರೆ ಇವತ್ತು ಅವರ ನಂಬಿಕೆ ಅರ್ಥವಾದರೂ, ಆ ಕೈಯಲ್ಲೊಂದು ಮೊಬೈಲನ್ನು ಹಿಡಿದು ಅಲ್ಲಿಯೂ ತಮ್ಮ ಕ್ಯಾಮೆರಾ ಕೌಶಲ್ಯತೆಯನ್ನು ಯಾಕೆ ಪ್ರದರ್ಶಿಸಬೇಕೋ ಅರ್ಥವಾಗುವುದಿಲ್ಲ. ಹೌದು, ನಮ್ಮ ಮುಂದಿನ ಪೀಳಿಗೆಗೋ ಅಥವಾ ಪರಊರಿನ ಸ್ನೇಹಿತರಿಗೋ ನಮ್ಮ ಸಂಪ್ರದಾಯದ ಬಗ್ಗೆ ತಿಳುವಳಿಕೆ ಮೂಡಿಸಲು ಅವಶ್ಯಕತೆ ಇರಬಹುದು. ಆದರೆ ಅದಕ್ಕೆಂದೇ ಒಂದು ಛಾಯಾಚಿತ್ರಕಾರನನ್ನು ಇಂದಿನ ದಿನಗಳಲ್ಲಿ ಕರೆಸಿರುತ್ತಾರೆ. ವರ್ಷಕೊಮ್ಮೆ ಬರುವ ಈ ಕ್ಷಣವನ್ನು ಕಣ್ತುಂಬ ಭಕ್ತಿಯಿಂದ ನೋಡುವುದು ಬಿಟ್ಟು ನಮ್ಮ ಗಮನ ಮೊಬೈಲ್ ಮೇಲಿದ್ದರೆ ಏನು ಪ್ರಯೋಜನ.

ಇವತ್ತು ನಾವು ಏನೇ ತಿಂದ್ರು , ಎಲ್ಲಿಗೆ  ಹೋದ್ರು, ಏನು ಮಾಡಿದ್ರೂ ಎಲ್ಲದರ ಫೋಟೋ ತೆಗೆದು  ಸಾಮಾಜಿಕ ಮಾಧ್ಯಮದ ಮೂಲಕ ನಮ್ಮ ಸ್ನೇಹಿತರಿಗೆ ತಿಳಿಸಿಬಿಡುತ್ತೇವೆ. ದೈನಂದಿನ ದಿನಚರಿ, ಮನೆ ಕೆಲಸ, ವೃತ್ತಿ ಜೀವನದ ಒತ್ತಡದಲ್ಲಿ ಕೆಲವೊಂದು ಕ್ಷಣಗಳನ್ನು ಆಧ್ಯಾತ್ಮಿಕತೆಯೆಡೆಗೆ ತಮ್ಮನ್ನು ತೊಡಗಿಸಿ ಕೊಳ್ಳುವುದರಿಂದ ಕೆಲವರಿಗೆ ಸಂತೃಪ್ತಿಯಾಗುತ್ತದೆ. ಅಧ್ಯಾಪಕರು ಪಾಠ ಮಾಡುವಾಗ,  ಆಫೀಸಲ್ಲಿ ಮೀಟಿಂಗ್ ನಡೆಯುತ್ತಿರುವಾಗ , ಸ್ನೇಹಿತರನ್ನು ಭೇಟಿಯಾದಾಗ ಹೇಗೆ ಮೊಬೈಲನ್ನು ಪಕ್ಕಕ್ಕೆ ಇಡುತ್ತೆವೆಯೋ ಹಾಗೆಯೇ ಆಧ್ಯಾತ್ಮಿಕ ಸ್ಥಳಗಳಲ್ಲೂ ಮೊಬೈಲ್ ಬಳಕೆಯಿಂದ ದೂರವಿರಲು ಪ್ರಯತ್ನಿಸೋಣ.

:)

Comments

Popular posts from this blog

ಕ್ಷಮಿಸಿ ಟೀಚರ್ ...!

ಆವತ್ತು ಎಂದಿನಂತೆ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಅದು ಯಾವತ್ತೂ ಮರೆಯದ ದಿನವಾಗುತ್ತದೆಂದು ಕನಸಲ್ಲೂ ಎಣಿಸಿರಲಿಲ್ಲ . ತಪ್ಪು ಎನ್ನುವುದಕ್ಕಿಂತ ಏನೋ ಪಾಪ ಮಾಡಿದ್ದೇನೆ ಎಂಬ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ. ನನ್ಮುಂದೆ ಬಸ್ಸೊಂದು ನಿಂತಿತ್ತು. ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿರುವುದೆಂದು ಬಸ್ಸು ನೋಡಿದಾಗ  ತಿಳಿಯಿತು. ನಾನೋ ಇದನೆಲ್ಲ ನೋಡುತಿದ್ದರು ನನ್ನ ಮನಸ್ಸು ಏನೋ ಬೇರೆ ಕಡೆಯೇ ತೇಲಿದಂತ ಅನುಭವ. ಆ ಬಸ್ಸಿನ ಕಿಟಕಿಯಿಂದ  ಸುಮಾರು ಇಪ್ಪತೆಂಟು ಮೂವತ್ತು ವರ್ಷದ ಹುಡುಗಿಯೊಬ್ಬಳು ನನ್ನ ಕಡೆ ನೋಡಿ ಕೈ ಬೀಸಿದಂತೆ ಆಯ್ತು. ಆದರೆ ಯಾರೆಂಬುದು ನನಗೆ ತಿಳಿಯಲೇ ಇಲ್ಲ. ನನ್ನ ನೋಡಿ ಕೈ ಬೀಸಿದಳೋ ಅಲ್ಲ ಪಕ್ಕದಲ್ಲಿರುವವರಿಗೆ ಸನ್ನೆ ಮಾಡುತಿದ್ದಳೊ ತಿಳಿಯಲಿಲ್ಲ.ಆಚೆ ಈಚೆ ನೋಡಿದರೆ ಯಾರು ಅವಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಮತ್ತೆ ಅವಳು ನನ್ನನ್ನೇ ನೋಡ್ತಿದಂತೆ ಅನಿಸಿತು. ಏನು ಯೋಚಿಸುತಿದ್ದೆನೋ ದೇವರಿಗೆ ಗೊತ್ತು. ನಾನು ಅವಳಿಗೆ ಪ್ರತಿಕ್ರಿಯಿಸಲೇ  ಇಲ್ಲ. ನಾನು ಅವಳಿಗೆ ಕೈ ಬೀಸುತಿದ್ದರೆ  ನನ್ನ ಗಂಟೇನು  ಹೋಗುತಿತ್ತು ಎಂದು ಇವತ್ತಿನವರೆಗೂ  ನನ್ನನು ನಾನು ಎಷ್ಟು ಬಾರಿ ಬೈದುಕೊಂಡಿದ್ದೇನೋ ಏನೋ. ಸ್ವಲ್ಪ ಹೊತ್ತಾದ ನಂತರ ಯಾರೋ ಬಸ್ಸಿನಿಂದ ಇಳಿದಂತಾಯ್ತು.  ಇಳಿದವಳನ್ನು ನೋಡಿ ಅವಾಕ್ಕಾದೆ . ನಾನು ಕಲಿತ ಶಾಲೆಯಲ್ಲೇ ನನ್ನ ಕಸಿನ್ ಓದುತ್ತಿದ್ದಳು . ಅವಳು ಬಸ್ಸಿನಿಂದ ಇಳಿದಂತೆ ಕಿಟಕಿ ಬದಿಯಲ್ಲಿದ್ದ

ಹೀಗೆ ಒಂದು ದಿನ ಕನಸಲ್ಲಿ ಕಂಡ ನನ್ನ ಕನಸಿನ ಗುಡಿಸಲು

ಕೃಪೆ : ಗೂಗಲ್ ಇಮೇಜ್ಸ್                       ಮಳೆ ಹನಿಗಳು  ಕಿಟಕಿ ಗಾಜಿಗೆ ಬೀಳುವ ಸದ್ದು ಕೇಳಿ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಅಲ್ಲೇ ಮೇಜಲ್ಲಿಟ್ಟ ಬುದ್ಧನ ಮುಗುಳ್ನಗೆ, ಪಕ್ಕದಲ್ಲಿರುವ ಕೃಷ್ಣಾರ್ಜುನರ  ರಥದ ಮಾದರಿ ಕಂಡರೆ  ಏನೋ ಮನಸ್ಸಿಗೆ ಮುದ ನೀಡುವುದು . ಚಿಕ್ಕಂದಿನಿಂದ ಅವೆರಡನ್ನು ಕೊಳ್ಳುವ ಆಸೆ. ಆದರೆ ಎಲ್ಲಿಯೂ ನನಗೆ ಬೇಕಂತಿರುವುದು ಸಿಕ್ಕಿರಲಿಲ್ಲ. ಕಳೆದ ವರ್ಷ ಉಡುಗೊರೆಯಾಗಿ ಪಡೆದಿದ್ದೆ.  ಪರದೆ ಸರಿಸಿ ಕಿಟಕಿ ಹೊರಗೆ ನೋಡಿದ್ರೆ ನಾ ನೆಟ್ಟ ಗುಲಾಬಿ  ಗಿಡದಲ್ಲಿದ್ದ ಒಂದು ಗುಲಾಬಿ ನನ್ನ ನೋಡಿ ನಕ್ಕಂತೆ ಕಾಣುತಿತ್ತು. ಹೂವೆಂದರೆ  ಪಂಚಪ್ರಾಣ. ಮಲ್ಲಿಗೆಯ ಸುವಾಸನೆ, ಗುಲಾಬಿಯ  ಸೌಂದರ್ಯ ಪದಗಳಲ್ಲಿ  ವರ್ಣಿಸಲು ಅಸಾಧ್ಯ.  ಮಳೆ ಬಿದ್ದಾಗ  ಆ ಮಣ್ಣಿನ ಸುವಾಸನೆ ನನ್ನನ್ನು ಮನೆಯಿಂದ  ಹೊರಬರಲು ಆಹ್ವಾನಿಸಿದಂತಾಯ್ತು. ಎದ್ದು ಛತ್ರಿ ತೆಗೊಂಡು ಹೊರಬಂದು ಹಾಗೆಯೇ ಬರಿಗಾಲಲ್ಲಿ ಅಂಗಳದಲ್ಲಿ ನಿಂತು, ನೀರಿನ ಗುಳ್ಳೆಗಳ ಸಾಲು ನೋಡುತ್ತಾ ನಿಂತು ಬಿಟ್ಟೆ. ಹಾಗೆ ದೃಷ್ಟಿ  ಬಿದ್ದದ್ದು ಹುಲ್ಲಿನ ಮೇಲಿರುವ ಆ ಕೆಂಪು ಕೀಟದ ಮೇಲೆ. ಕೇವಲ ಮಳೆಗಾಲದಲ್ಲಿ ಮಾತ್ರ ನಾ ಆ  ಕೀಟವನ್ನು ಕಂಡಿದ್ದು. ಹೆಸರು ಇನ್ನು ಗೊತ್ತಿಲ್ಲ ಆದ್ರೆ ಮಳೆ ಹನಿಗಳೊಂದಿಗೆ ಅವುಗಳು ಆಕಾಶದಿಂದ ಬೀಳುತ್ತವೆ ಎಂದು ಸಣ್ಣದಿರುವಾಗ ಯಾರೋ ಹೇಳಿದ ನೆನಪು. ಬಲಕ್ಕೆ ತಿರುಗಿದರೆ ನನ್ನ ತರಕಾರಿ ತೋಟ. ಬಾಳೆ, ತೆಂಗು, ಮಾವಿನ ಮರಗಳು ಮಳೆಗೆ ಮೈ ಒಡ್ಡಿ ನಿಂ

ಫೀಸ್ ಜಾಸ್ತಿಯಾಗಲು ಕಾರಣ ಪಾಪದವರು ವಿದ್ಯಾವಂತರಾಗ ಬೇಕೆನ್ನುವುದರಿಂದ ಅಂತೆ !!!

ಅದೊಂದು ಸಮಾರಂಭದಲ್ಲಿ ನನ್ನ ಸುತ್ತಮುತ್ತ  ಕೆಲವು ಹೆಂಗಸರು ಕೂತು ಮಾತಾಡುತ್ತಿದ್ದರು. ಹೆಂಗಸು ೧ : (ಪಕ್ಕದಲ್ಲಿ ಕೂತಿದ್ದ ಹುಡುಗಿಯನ್ನ ) "ಏನಮ್ಮ ಏನ್ ಕಲಿತಿದ್ದೀಯಾ ?" ಹೆಂಗಸು ೨ : "ಅವಳನ್ನ ಇಂಜಿನಿಯರಿಂಗ್ ಗೆ ಸೇರಿಸಿದ್ದೀವಿ. ಇನ್ನು ಮುಂದಿನ ವಾರ ಕ್ಲಾಸ್ಸ್ ಸ್ಟಾರ್ಟ್ ಆಗುತ್ತೆ." ಮಗಳಿಗೆ ಕೇಳಿದ ಪ್ರಶ್ನೆಗೆ ತಾಯಿ ಉತ್ತರಿಸಿದರು. ಮಗಳು ತನ್ನ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಳು. ತನ್ನ ಸುತ್ತಮುತ್ತ ಇರುವ ಜನರನ್ನ ಮಾತಾಡಿಸುವದಕ್ಕಿಂತ ಪೊಕೀಮೋನ್ ಹಿಡಿಯುದರಲ್ಲಿ ಬ್ಯುಸಿ ಆಗಿದ್ದಳು. ಹೆಂಗಸು ೧ : "ಒಹ್! ಹಾಗೇನು .ಅಂದ್ರೆ  ಪಿಯುಸಿ ಯಲ್ಲಿ ಒಳ್ಳೆ ಮಾರ್ಕ್ಸ್ ಬಂದಿರ್ಬೇಕಲ್ಲ? ಒಳ್ಳೇದು ." ಹೆಂಗಸು ೨ : "ಇಲ್ಲ ಕಣ್ರೀ . ಫೇಲ್ ಆಗಿದ್ರು ಫೇಲ್ ಆದ್ಲು ಎಂದು ಹೇಳೋಕ್ಕೆ ನಾನು ಸಂಕೋಚ ಪಡ್ತಿರ್ಲಿಲ್ಲ. ಅಷ್ಟು ಕಮ್ಮಿ ಮಾರ್ಕ್ಸ್ ತೆಗ್ದಿದ್ದಾಳೆ ನೋಡಿ. ನಮಗೆ ಅವಳು ಇಂಜಿನಿಯರಿಂಗ್ ಮಾಡಬೇಕೆಂಬುದು ಆಸೆ. ಬಿ ಎಸ್ಸಿ ಎಲ್ಲ ಕಲಿತರೆ ಏನು ಸಿಗ್ತದೆ ಹೇಳಿ. ಹಾಗೆ ಮಂಗಳೂರಲ್ಲೇ ಒಂದು ಕಾಲೇಜು ಗೆ  ಮ್ಯಾನೇಜ್ಮೆಂಟ್ ಸೀಟ್ ಅಲ್ಲಿ ಆರ್ಕಿಟೆಕ್ಚರ್ ಗೆ ಸೇರಿಸಿದ್ದೀವಿ. ಈ ಕೋರ್ಸ್ ಗೆ ಸೇರಿದ್ರೆ ೨ ಸಲ ಟೂರ್ ಗೆ ಹೋಗಬಹುದು ಅಂತ ಅವಳ ಗೆಳೆಯರು ಹೇಳಿದ್ದಾರಂತೆ. " ಹೆಂಗಸು ೧: "ಅದಕ್ಕೇನಂತೆ ಬಿಡಿ. ಇರುವುದು ಒಬ್ಬಳು ಮಗಳು ,  ಕಲೀಲಿ. " ಹೆಂಗಸು ೨: "ಏನೋ ಅವ