Skip to main content

ಸ್ಪೂರ್ತಿ

ಮುಂಜಾನೆ ಎದ್ದು ಸ್ನಾನ ಮಾಡಿ ಬಂದು ಮೊಬೈಲ್ ನೋಡಿದರೆ ಆರು ಮಿಸ್ಸ್ಡ್ ಕಾಲ್ಸ್ ಇದ್ವು. ಕರೆ ಮಾಡಿದೆ. ಆಚೆಯಿಂದ "ಅಕ್ಕ ಇವತ್ತು ಏಕ್ಸಾಮ್ ಬರೀಲೀಕ್ಕೆ ಬರ್ತಿದ್ದೀರಿ ತಾನೇ ?" ಎಂದು  ಹುಡುಗಿ ಗಾಬರಿ ಸ್ವರದಲ್ಲಿ ಕೇಳಿದಳು. "ಹೌದು ! ಹೊರಡ್ತಿದ್ದೀನಿ." ಎಂದು ಸಮಾಧಾನಿಸಿ ಫೋನ್ ಪಕ್ಕಕ್ಕಿಟ್ಟು, ಬೇಗನೆ ತಯಾರಾಗಿ ರೂಮಿನಿಂದ ಹೊರಡಿದೆ. ಅದು ೪೫ ನಿಮಿಷಗಳ ಪ್ರಯಾಣ. ಅಷ್ಟರಲ್ಲಿ ಮೂರ್ನಾಲ್ಕು ಸಲ ನಾನು ಎಲ್ಲಿದ್ದೀನಿ ಎಂದು ವಿಚಾರಿಸಲು ಕರೆ ಮಾಡಿದ್ದಳು. ೮:೪೫ ಗೆ ತಲುಪಬೇಕಿತ್ತು. ೮:೩೦ ಗೆ ನೇ ತಲುಪಿದ್ದೆ.

ಕಾಲೇಜು ಹೊರಗೆ ತನ್ನ ಗೆಳತಿಯೊಟ್ಟಿಗೆ ಕಾದು ನಿಂತಿದ್ದಳು.  "ಹಾಯ್, ಸ್ಪೂರ್ತಿ ತಾನೇ ? " ಅಂದೆ. "ಹೌದಕ್ಕಾ, ಬಂದ್ರಾ. ಹೇಗೆ ಪರಿಚಯವಾಯ್ತು . ನಾವು ಎಂದೂ ಭೇಟಿಯಾಗಿಲ್ಲ ಅಲ್ವಾ" ಎಂದಾಗ, ಅಲ್ಲಿರುವ ಜನರಿಗಿಂತ ಭಿನ್ನವಾಗಿ ಅವಳು ಇದ್ದುದ್ದರಿಂದ ಪರಿಚಯವಾಯ್ತು ಎಂದು ಹೇಳಲು ಮನಸ್ಸಾಗಲಿಲ್ಲ. ಸುಮ್ನೆ ಅವಳ ಬೆನ್ನು ತಟ್ಟಿ ನಕ್ಕು ಬಿಟ್ಟೆ. "ಸಾರೀ ಅಕ್ಕ, ತುಂಬಾ ಸಲ ಕಾಲ್ ಮಾಡಿದೆ. ಮೊನ್ನೆ ನನ್ನ ಗೆಳತಿಗೆ ಒಬ್ರು ಏಕ್ಸಾಮ್ ಬರೀಲಿಕ್ಕೆ ಬರ್ತೇನೆ ಹೇಳಿ ಬಂದಿರ್ಲಿಲ್ಲ. ಅದ್ಕೆ ಗಾಬರಿಯಾಗಿದ್ದೆ " ಅಂದ್ಲು.

ಕಾಲೇಜು ಒಳಗೆ ಹೋಗಿ ರೂಮ್ ಹುಡುಕಿ ಅಲ್ಲಿ ಕೂತು ಮಾತಾಡಲು ಶುರು ಮಾಡಿದ್ವಿ. ಸ್ವಲ್ಪ ಹೊತ್ತಾದ ನಂತರ ಸ್ಪೂರ್ತಿ ಹಾಗು ಅವಳ ಗೆಳತಿಯಂತೆ ಏಳೆಂಟು ಜನ ತಮ್ಮ ಬರಹಗಾರರೊಟ್ಟಿಗೆ (Scribe) ಬಂದರು.  ಏಕ್ಸಾಮ್ ಶುರುವಾಯ್ತು. ೩ ಘಂಟೆಯೊಳಗೆ ಬರೆದು ಮುಗಿಸಿದ್ವಿ. ಎಲ್ಲಾ ಪ್ರಶ್ನೆಗಳಿಗೂ ಅಚ್ಚುಕಟ್ಟಾಗಿ ಉತ್ತರ ನೀಡಿದ್ದಳು. ಅದಾದ್ನಂತರ ಇನ್ನು ನಮಗೆ ೩ ತಿಂಗಳು ರಜೆ ಅಕ್ಕ ಅಂತ ಮುಗುಳ್ನಗುತ್ತಾ ಹೇಳಿದಳು. ಊರಿಗೆ ಹೋಗಿ ಅಪ್ಪ, ಅಮ್ಮ, ತಂಗಿ ಯೊಟ್ಟಿಗೆ ಮಜಾ ಮಾಡ್ಬಹುದಲ್ವಾ  ಎಂದಾಗ, "ಇಲ್ಲ ಅಕ್ಕ ಮನೆಯಲ್ಲಿ ಒಂದೇ ವಾರ ಇದ್ದು ಬರ್ತೀನಿ, ಆಮೇಲೆ ಇಲ್ಲಿ ಬಂದು ಕಂಪ್ಯೂಟರ್ ಕೋರ್ಸ್ ಮಾಡ್ತೀನಿ" ಅಂದ್ಲು.

ಪರೀಕ್ಷೆ ಮುಗಿಸಿ ಇಡೀ ವರ್ಷ  ಓದಿ ಓದಿ ಸಾಕಾಯ್ತು(ಓದಿರುವುದು ಕೇವಲ ಪರೀಕ್ಷೆಯ ಹಿಂದಿನ ರಾತ್ರಿಯಾಗಿದ್ದರು) , ೩ ತಿಂಗಳು ರಜಾ ಸಿಕ್ಕರೆ ದಿನಾ ಬೆಳಗ್ಗೆ ಹತ್ತು ಗಂಟೆ ತನಕ ಮಲಗಿ, ದಿನವಿಡೀ ಮೂವಿ, ಸೀರೀಸ್ ಅಥವಾ ಗೇಮ್ ಆಡ್ಬಹುದು ಅಂತ ಲೆಕ್ಕಾಚಾರ ಹಾಕುತ್ತಾ ನಾವು ಇರುತ್ತೇವೆ.  ಇಲ್ಲಿ ಹದಿನಾರು ವರ್ಷದ ಹುಡುಗಿ, ಆಡಿಯೋ ಕೇಳಿ, ಬ್ರೈಲ್ ಪುಸ್ತಕ ಓದಿ ಪರೀಕ್ಷೆ ಬರೆದು, ಇಷ್ಟು ಚಿಕ್ಕ ವಯಸ್ಸಲ್ಲೇ ತನ್ನ ಹೆತ್ತವರು, ಒಡಹುಟ್ಟಿದವರಿಂದ ದೂರ ಇದ್ದು ಹಾಸ್ಟೆಲ್ ಅಲ್ಲಿ ಇದ್ರೂ, ತನಗೆ ಸಿಕ್ಕ ಸಮಯದಲ್ಲಿ ಏನಾದರೂ ಹೊಸತು ಕಲಿಯಬೇಕೆಂದು ಹೊರಟಿದನ್ನು ನೋಡಿ ಮೂಕ ವಿಸ್ಮಿತಳಾದೆ.  ಮುಂದೇನಾಗಬೇಕು ಅಂತ ಅನ್ಕೊಂಡಿದ್ದೀಯ ಎಂದು ಕೇಳಿದರೆ, "ಅಕ್ಕಾ ನಂಗೆ ಐಎಎಸ್ ಆಫೀಸರ್ ಆಗ್ಬೇಕು" ಅಂದ್ಲು. ಅವಳ ಪ್ರತಿಯೊಂದು ಮಾತು, ಅವಳಿಗೆ ತನ್ನ ಮೇಲಿದ್ದ ಆತ್ಮ ವಿಶ್ವಾಸ ತೋರಿಸುತಿತ್ತು. ತನ್ನ ಕುರುಡುತನವನ್ನು ಒಂದು ಮಿತಿಯಾಗಿ ಎಣಿಸದೆ ಕನಸನ್ನು ಕಾಣುತ್ತಿರುವ ಹುಡುಗಿಯೇ, ನಮಗೆಲ್ಲರಿಗೂ ಸ್ಪೂರ್ತಿ.

Comments

Popular posts from this blog

ಕ್ಷಮಿಸಿ ಟೀಚರ್ ...!

ಆವತ್ತು ಎಂದಿನಂತೆ ಕಾಲೇಜಿಗೆ ಹೋಗಲು ಬಸ್ಸಿಗೆ ಕಾಯುತ್ತಿದ್ದೆ. ಅದು ಯಾವತ್ತೂ ಮರೆಯದ ದಿನವಾಗುತ್ತದೆಂದು ಕನಸಲ್ಲೂ ಎಣಿಸಿರಲಿಲ್ಲ . ತಪ್ಪು ಎನ್ನುವುದಕ್ಕಿಂತ ಏನೋ ಪಾಪ ಮಾಡಿದ್ದೇನೆ ಎಂಬ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ. ನನ್ಮುಂದೆ ಬಸ್ಸೊಂದು ನಿಂತಿತ್ತು. ಶಾಲಾ ಮಕ್ಕಳು ಪ್ರವಾಸಕ್ಕೆ ಹೊರಟಿರುವುದೆಂದು ಬಸ್ಸು ನೋಡಿದಾಗ  ತಿಳಿಯಿತು. ನಾನೋ ಇದನೆಲ್ಲ ನೋಡುತಿದ್ದರು ನನ್ನ ಮನಸ್ಸು ಏನೋ ಬೇರೆ ಕಡೆಯೇ ತೇಲಿದಂತ ಅನುಭವ. ಆ ಬಸ್ಸಿನ ಕಿಟಕಿಯಿಂದ  ಸುಮಾರು ಇಪ್ಪತೆಂಟು ಮೂವತ್ತು ವರ್ಷದ ಹುಡುಗಿಯೊಬ್ಬಳು ನನ್ನ ಕಡೆ ನೋಡಿ ಕೈ ಬೀಸಿದಂತೆ ಆಯ್ತು. ಆದರೆ ಯಾರೆಂಬುದು ನನಗೆ ತಿಳಿಯಲೇ ಇಲ್ಲ. ನನ್ನ ನೋಡಿ ಕೈ ಬೀಸಿದಳೋ ಅಲ್ಲ ಪಕ್ಕದಲ್ಲಿರುವವರಿಗೆ ಸನ್ನೆ ಮಾಡುತಿದ್ದಳೊ ತಿಳಿಯಲಿಲ್ಲ.ಆಚೆ ಈಚೆ ನೋಡಿದರೆ ಯಾರು ಅವಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಮತ್ತೆ ಅವಳು ನನ್ನನ್ನೇ ನೋಡ್ತಿದಂತೆ ಅನಿಸಿತು. ಏನು ಯೋಚಿಸುತಿದ್ದೆನೋ ದೇವರಿಗೆ ಗೊತ್ತು. ನಾನು ಅವಳಿಗೆ ಪ್ರತಿಕ್ರಿಯಿಸಲೇ  ಇಲ್ಲ. ನಾನು ಅವಳಿಗೆ ಕೈ ಬೀಸುತಿದ್ದರೆ  ನನ್ನ ಗಂಟೇನು  ಹೋಗುತಿತ್ತು ಎಂದು ಇವತ್ತಿನವರೆಗೂ  ನನ್ನನು ನಾನು ಎಷ್ಟು ಬಾರಿ ಬೈದುಕೊಂಡಿದ್ದೇನೋ ಏನೋ. ಸ್ವಲ್ಪ ಹೊತ್ತಾದ ನಂತರ ಯಾರೋ ಬಸ್ಸಿನಿಂದ ಇಳಿದಂತಾಯ್ತು.  ಇಳಿದವಳನ್ನು ನೋಡಿ ಅವಾಕ್ಕಾದೆ . ನಾನು ಕಲಿತ ಶಾಲೆಯಲ್ಲೇ ನನ್ನ ಕಸಿನ್ ಓದುತ್ತಿದ್ದಳು . ಅವಳು ಬಸ್ಸಿನಿಂದ ಇಳಿದಂತೆ ಕಿಟಕಿ ಬದಿಯಲ್ಲಿದ್ದ

ಮೊಬೈಲ್ ಕ್ಯಾಮೆರಾದಲ್ಲಿ ಭೂತಕೋಲ !!

ಬೆಳಿಗ್ಗೆ ಎದ್ದಕೂಡಲೇ ಸರಿಯಾಗಿ ಕಣ್ಣು ಬಿಟ್ಟಿರದಿದ್ದರು,  ನಮ್ಮ ಕೈ ಮಾತ್ರ  ಮೊಬೈಲಿಗಾಗಿ ಹುಡುಕಾಡಲು ಶುರು ಮಾಡುತ್ತೆ. ಅರೆಬರೆ ನಿದ್ದೆಯಲ್ಲೂ ಬೇರೆಯವರ ಸ್ಟೇಟಸ್ ನೋಡುವ ಕುತೂಹಲ. ಪಕ್ಕದಲ್ಲಿ ಕೂತವರಿಗೆ ಗುಡ್ ಮಾರ್ನಿಂಗ್ ಹೇಳುವ ಬದಲು ಸಾವಿರಾರು ಮೈಲಿ ದೂರವಿದ್ದ ನೂರಾರು ಜನಕ್ಕೆ ಮುಂಜಾನೆಯ ಶುಭಾಷಯ ಕಳಿಸಿ ಏಳುವುದು ನಮ್ಮ ದಿನಚರಿಯಾಗಿದೆ. ಸ್ಟೇಟಸ್ ಅಲ್ಲಿರುವ ಟಿಕ್ ಟಾಕ್ ವಿಡಿಯೋಗಳು ಇಂದು ನಮಗೆ ಸುಪ್ರಭಾತ. ಹೀಗೆ ಬೆಳಿಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ಕಣ್ಣು ಮುಚ್ಚುವವರೆಗೂ, ದೈನಂದಿನ ಕೆಲಸದ ನಡುವೆಯೂ ಮೊಬೈಲ್ ನೋಡುತ್ತಾ ದಿನ ಕಳೆಯುತ್ತೇವೆ. ಕಳೆದ ವಾರ ನಮ್ಮೂರಲ್ಲಿ  ನಡೆಯುವ ಭೂತಕೋಲಕ್ಕೆ ಹೋಗಿದ್ದೆ. ದಕ್ಷಿಣ ಕನ್ನಡ ಉಡುಪಿ ಪ್ರದೇಶಗಳಲ್ಲಿ ದೇವರನ್ನು ನಂಬಿದಷ್ಟೇ ಭೂತವನ್ನು ಜನರು ನಂಬುತ್ತಾರೆ. ಕೆಲಸಕ್ಕೆಂದು ಪರ ಊರಲ್ಲಿ ನೆಲೆಸಿದ್ದರೂ, ವರ್ಷಕ್ಕೊಮ್ಮೆ ನಡೆಯುವ ಈ ಧಾರ್ಮಿಕ ಆಚರಣೆಗೆ ಎಲ್ಲರೂ ತಾವು ಹುಟ್ಟಿ ಬೆಳೆದ ಊರಿಗೆ ಬರುವುದುಂಟು. ಸಣ್ಣದಿರುವಾಗ ಐಸ್ಕ್ರೀಮ್, ಚರ್ಮುರಿ ತಿನ್ನಲು ಹಣ ಸಿಗುತ್ತದೆಂದು ಭೂತಕೋಲಕ್ಕೆ ಹುಮ್ಮಸ್ಸಿನಿಂದ ಹೋಗುತ್ತಿದ್ದೆ. ಹೈಸ್ಕೂಲಿಗೆ ಬಂದ ನಂತರ, ಭೂತಕೋಲ ವೆಲ್ಲ ಮೂಢನಂಬಿಕೆ, ಪಾತ್ರಿಗಳು ಚೆಂಡೆ, ಬ್ಯಾಂಡಿನ ಶಬ್ದಕ್ಕೆ ಹಾಗೆ ನಲಿಯುದೆಂದು ಅಮ್ಮನಿಗೆ ಹೇಳಿದ್ದುಂಟು. ಆಗ ಅಮ್ಮ, ವಿಜ್ಞಾನ ಕಲಿತಕೂಡಲೇ ನಮ್ಮ ಪೂರ್ವಜರು ನಂಬಿಕೊಂಡು ಬಂದ ಸಂಪ್ರದಾಯವನ್ನು ಮರೀಬೇಡಿ ಎಂದು ತಿಳಿ ಹ