ಬೆಳಿಗ್ಗೆ ಎದ್ದಕೂಡಲೇ ಸರಿಯಾಗಿ ಕಣ್ಣು ಬಿಟ್ಟಿರದಿದ್ದರು, ನಮ್ಮ ಕೈ ಮಾತ್ರ ಮೊಬೈಲಿಗಾಗಿ ಹುಡುಕಾಡಲು ಶುರು ಮಾಡುತ್ತೆ. ಅರೆಬರೆ ನಿದ್ದೆಯಲ್ಲೂ ಬೇರೆಯವರ ಸ್ಟೇಟಸ್ ನೋಡುವ ಕುತೂಹಲ. ಪಕ್ಕದಲ್ಲಿ ಕೂತವರಿಗೆ ಗುಡ್ ಮಾರ್ನಿಂಗ್ ಹೇಳುವ ಬದಲು ಸಾವಿರಾರು ಮೈಲಿ ದೂರವಿದ್ದ ನೂರಾರು ಜನಕ್ಕೆ ಮುಂಜಾನೆಯ ಶುಭಾಷಯ ಕಳಿಸಿ ಏಳುವುದು ನಮ್ಮ ದಿನಚರಿಯಾಗಿದೆ. ಸ್ಟೇಟಸ್ ಅಲ್ಲಿರುವ ಟಿಕ್ ಟಾಕ್ ವಿಡಿಯೋಗಳು ಇಂದು ನಮಗೆ ಸುಪ್ರಭಾತ. ಹೀಗೆ ಬೆಳಿಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ಕಣ್ಣು ಮುಚ್ಚುವವರೆಗೂ, ದೈನಂದಿನ ಕೆಲಸದ ನಡುವೆಯೂ ಮೊಬೈಲ್ ನೋಡುತ್ತಾ ದಿನ ಕಳೆಯುತ್ತೇವೆ. ಕಳೆದ ವಾರ ನಮ್ಮೂರಲ್ಲಿ ನಡೆಯುವ ಭೂತಕೋಲಕ್ಕೆ ಹೋಗಿದ್ದೆ. ದಕ್ಷಿಣ ಕನ್ನಡ ಉಡುಪಿ ಪ್ರದೇಶಗಳಲ್ಲಿ ದೇವರನ್ನು ನಂಬಿದಷ್ಟೇ ಭೂತವನ್ನು ಜನರು ನಂಬುತ್ತಾರೆ. ಕೆಲಸಕ್ಕೆಂದು ಪರ ಊರಲ್ಲಿ ನೆಲೆಸಿದ್ದರೂ, ವರ್ಷಕ್ಕೊಮ್ಮೆ ನಡೆಯುವ ಈ ಧಾರ್ಮಿಕ ಆಚರಣೆಗೆ ಎಲ್ಲರೂ ತಾವು ಹುಟ್ಟಿ ಬೆಳೆದ ಊರಿಗೆ ಬರುವುದುಂಟು. ಸಣ್ಣದಿರುವಾಗ ಐಸ್ಕ್ರೀಮ್, ಚರ್ಮುರಿ ತಿನ್ನಲು ಹಣ ಸಿಗುತ್ತದೆಂದು ಭೂತಕೋಲಕ್ಕೆ ಹುಮ್ಮಸ್ಸಿನಿಂದ ಹೋಗುತ್ತಿದ್ದೆ. ಹೈಸ್ಕೂಲಿಗೆ ಬಂದ ನಂತರ, ಭೂತಕೋಲ ವೆಲ್ಲ ಮೂಢನಂಬಿಕೆ, ಪಾತ್ರಿಗಳು ಚೆಂಡೆ, ಬ್ಯಾಂಡಿನ ಶಬ್ದಕ್ಕೆ ಹಾಗೆ ನಲಿಯುದೆಂದು ಅಮ್ಮನಿಗೆ ಹೇಳಿದ್ದುಂಟು. ಆಗ ಅಮ್ಮ, ವಿಜ್ಞಾನ ಕಲಿತಕೂಡಲೇ ನಮ್ಮ ಪೂರ್ವಜರು ನಂಬಿಕೊಂಡು ಬಂದ ಸಂಪ್ರದಾಯವ...
Feelings when written are better delivered than spoken.